Monday, 11 December 2023

ನಿಸರ್ಗದ ಸ್ವರ್ಗ..ವನ್ಯಜೀವಿಗಳ ತಾಣ..ಹೆಚ್.ಡಿ ಕೋಟೆಯ ವಿಶೇಷತೆ ಬಗ್ಗೆ ನಿಮಗೆಷ್ಟು ಗೊತ್ತು..?

             ನಿಸರ್ಗದ ಸೌಂದರ್ಯವನ್ನು ಮಡಿಲಲ್ಲಿಟ್ಟುಕೊಂಡು ವನ್ಯ ಸಂಪತ್ತಿನಿಂದ ಮೆರೆಯುತ್ತಿರುವ ಮೈಸೂರು ಜಿಲ್ಲೆಯ ತಾಲೂಕು ಕೇಂದ್ರವಾಗಿರುವ ಹೆಚ್.ಡಿ.ಕೋಟೆ ಹಲವು ಪ್ರವಾಸಿ ತಾಣಗಳನ್ನು ಹೊಂದಿ ದೂರದ ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ.ಕಬಿನಿ, ತಾರಕ, ನುಗು, ಹೆಬ್ಬಳ್ಳ ಜಲಾಶಯಗಳು, ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ಸಹೋದರಿ ನೆಲೆ ಶ್ರೀ ಚಿಕ್ಕದೇವಮ್ಮ ಬೆಟ್ಟ, ಖೆಡ್ಡಾ ಮೂಲಕ ಹಿಡಿದು ಪಳಗಿಸುತ್ತಿದ್ದ ಕಾಕನಕೋಟೆ ಹೀಗೆ ಹಲವಾರು ನೋಡತಕ್ಕ ಪ್ರವಾಸಿ ತಾಣಗಳಲ್ಲದೆ, ಗಿಡಮರಗಳಿಂದ ಆವೃತವಾದ ವನಸಿರಿ, ಅದರೊಳಗಿನ ವನ್ಯಪ್ರಾಣಿಗಳ ಸಂಪತ್ತು ನಗರದ ಗೌಜು ಗದ್ದಲಗಳಲ್ಲಿ ಮುಳುಗಿ ಹೋದರವರನ್ನು ಹೊರ ತಂದು ಮಾನಸಿಕ ನೆಮ್ಮದಿ ನೀಡುವ ತಾಣವಾಗಿಯೂ ಗಮನಸೆಳೆಯುತ್ತಿದೆ.ಹೆಚ್.ಡಿ ಕೋಟೆಗೊಂದು ಸುತ್ತು ಬಂದರೆ ಇಲ್ಲಿ ವೃಕ್ಷ ಮತ್ತು ವನ್ಯ ಸಂಪತ್ತು ಹೇಗಿತ್ತು ಎಂಬುದಕ್ಕೆ ಹಲವು ನಿದರ್ಶನಗಳು ಸಿಗುತ್ತವೆ. ಹಿಂದಿನ ರಾಜರ ಕಾಲದಲ್ಲಿ ಮೈಸೂರಿನ ಮಹಾರಾಜರು ಇಲ್ಲಿನ ಅರಣ್ಯಗಳಲ್ಲಿ ಬೇಟೆಯಾಡುತ್ತಿದ್ದರು. ಈ ವೇಳೆ ಅವರು ಉಳಿದುಕೊಳ್ಳಲು ಬಂಗಲೆಯನ್ನು ನಿರ್ಮಿಸಿದ್ದರು. ಅದುವೇ ಕಾರಾಪುರದ ಮಹಾರಾಜ ಬಂಗಲೆಯಾಗಿದೆ. (ಈ ಬಂಗಲೆ ಈಗ 'ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್ಸ್' ಆಗಿದೆ.) ಇಲ್ಲಿ ವನ್ಯ ಮೃಗಗಳನ್ನು ಅತ್ಯಂತ ಸನಿಹದಿಂದ ವೀಕ್ಷಿಸಲು ಕೆರೆಯೊಂದರ ಸನಿಹ ಕಟ್ಟಿರುವ ವೀಕ್ಷಣಾಗೋಪುರವಿದ್ದು ಅಲ್ಲಿಂದ ನಿಂತು ನೋಡಿದರೆ ಸುಂದರ ವಿಹಂಗಮ ನೋಟ ಲಭ್ಯವಾಗುವುದರೊಂದಿಗೆ ವನ್ಯಪ್ರಾಣಿಗಳ ದರ್ಶನವಾಗುತ್ತದೆ.

ಆಕರ್ಷಣೀಯ ಜಲಾಶಯಗಳು

ಇನ್ನು ತಾಲೂಕಿನ ಬೀಚನಹಳ್ಳಿಯಲ್ಲಿ 1975ರಲ್ಲಿ ನಿರ್ಮಿಸಿರುವ 'ಕಬಿನಿ ಜಲಾಶಯ', 1957ರಲ್ಲಿ ನಿರ್ಮಿಸಿರುವ 'ನುಗು ಜಲಾಶಯ' ಮತ್ತು 'ತಾರಕ ಜಲಾಶಯ' ಹಾಗೂ ಹೆಬ್ಬಳ್ಳದಲ್ಲಿರುವ 'ಹೆಬ್ಬಳ್ಳ ಜಲಾಶಯ' ಇವೆಲ್ಲವೂ ಪ್ರವಾಸಿ ತಾಣಗಳಾಗಿದ್ದು, ಮುಂಗಾರು ಮಳೆ ಅಬ್ಬರಿಸಿದಾಗ ಜಲಾಶಯ ಭರ್ತಿಯಾಗುವ ದೃಶ್ಯ ಅದ್ಭುತವಾಗಿರುತ್ತದೆ. ಮಹಾರಾಜರ ಕಾಲದಲ್ಲಿ ಹಾಗೂ ಆ ನಂತರ 1972ರವರೆಗೂ ಹೆಚ್.ಡಿ ಕೋಟೆ ತಾಲೂಕಿನ ಕಾಕನಕೋಟೆಯಲ್ಲಿ ಕಾಡಾನೆಗಳನ್ನು ಖೆಡ್ಡಾ ಮೂಲಕ ಹಿಡಿದು ಪಳಗಿಸುವ ಕಾರ್ಯವನ್ನು ಮಾಡಲಾಗುತ್ತಿತ್ತು.

ಆ ಕಾಲದಲ್ಲಿ ಖೆಡ್ಡಾದ ಮೂಲಕ ಕಾಡಾನೆಗಳನ್ನು ಹಿಡಿದು ಪಳಗಿಸುವುದರಲ್ಲಿ ಹೆಚ್.ಡಿ ಕೋಟೆ ಪ್ರಥಮ ಸ್ಥಾನದಲ್ಲಿತ್ತು. ಇಲ್ಲಿನ ಕಾಕನಕೋಟೆ ಅದಕ್ಕೆ ಹೆಸರುವಾಸಿಯಾಗಿತ್ತು. ಇವತ್ತಿನ ಬಳ್ಳೆ ಆನೆ ಶಿಬಿರ ದ್ರೋಣ, ರಾಜೇಂದ್ರ ಮತ್ತು ಅರ್ಜುನನಂತಹ ದೈತ್ಯ ಗಜಗಳ ನೆಲೆಯಾಗಿ ಗಮನಸೆಳೆಯುತ್ತಿದೆ. ಇಷ್ಟೇ ಅಲ್ಲದೆ ಹೆಚ್.ಡಿ ಕೋಟೆಯಲ್ಲಿ ಹಲವು ದೇಗುಲಗಳಿದ್ದು, ದೈವತಾಣವಾಗಿಯು ಪ್ರಸಿದ್ಧಿ ಹೊಂದಿದೆ. ಇಲ್ಲಿ ನಾಡದೇವತೆ ಚಾಮುಂಡೇಶ್ವರಿಯ ಸಹೋದರಿ ಚಿಕ್ಕಮ್ಮ ನೆಲೆನಿಂತಿರುವುದು ವಿಶೇಷವಾಗಿದೆ.

ಕಾಡಿನ ವೈಭವ ತೆರೆದಿಟ್ಟ ಸಿನಿಮಾಗಳು

ಸಾಗುವಾನಿ, ತೇಗ, ಗಂಧ, ಬೀಟೆ, ಹೊನ್ನೆ, ಬಿಲ್ವಾರ ಮುಂತಾದ ಬೆಲೆ ಬಾಳುವ ಮರಗಳು ಇಲ್ಲಿನ ಕಾಡಿನ ಸಂಪತ್ತನ್ನು ಹೆಚ್ಚಿಸಿವೆ. ಇಲ್ಲಿನ ಕಾಡುಗಳಲ್ಲಿ ತಯಾರಾದ ಮಾಸ್ತಿಯವರ 'ಕಾಕನಕೋಟೆ' ಶ್ರೀ ಕೃಷ್ಣ ಆಲನಹಳ್ಳಿಯವರ 'ಕಾಡು', ಎಂ.ಪಿ. ಶಂಕರ್ ಅವರ 'ಕಾಡಿನ ರಹಸ್ಯ' ಮತ್ತು 'ಕಾಡಿನ ರಾಜ' ಹಾಗೂ 'ಗಂಧದಗುಡಿ' ಸಿನಿಮಾಗಳು ಕಾಡಿನ ವೈಭವವನ್ನು ತೆರೆದಿಟ್ಟಿವೆ.

Weekend Travel: Best Weekend Getaways To HD Kote Taluk

ಇವತ್ತು ಹೆಚ್.ಡಿ.ಕೋಟೆಯ ಅರಣ್ಯ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಆದಿವಾಸಿಗಳು ವಾಸವಾಗಿದ್ದು, ನಗರದ ಜೀವನಕ್ಕಿಂತ ಅರಣ್ಯಕ್ಕೆ ಹೊಂದಿಕೊಂಡಂತೆ ಜೀವನವನ್ನು ನಡೆಸುತ್ತಾ ಹೋಗುತ್ತಿದ್ದು, ಸೌಲಭ್ಯ ವಂಚಿತರಾಗಿ ಜೀವನ ಸಾಗಿಸುತ್ತಾ ಬರುತ್ತಿದ್ದಾರೆ. ಬಹುತೇಕರು ತಮ್ಮ ಊರು ಬಿಟ್ಟು ಪಟ್ಟಣ ಸೇರುತ್ತಿದ್ದಾರೆ. ಒಂದು ಕಾಲದಲ್ಲಿ ಮೈಸೂರು ಮಹಾರಾಜರಿಗೆ ಅಚ್ಚುಮೆಚ್ಚಿನ ತಾಣವಾಗಿದ್ದ ಹೆಚ್.ಡಿ.ಕೋಟೆ ಪ್ರವಾಸೋದ್ಯಮಕ್ಕೆ ತನ್ನದೇ ರೀತಿಯಲ್ಲಿ ಕೊಡುಗೆಯನ್ನು ನೀಡುತ್ತಿದ್ದರೂ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿಯನ್ನು ಕಳಚಿಕೊಳ್ಳುವುದರಲ್ಲಿ ವಿಫಲವಾಗಿರುವುದು ಬೇಸರದ ಸಂಗತಿಯೇ.

ಹೆಚ್.ಡಿ.ಕೋಟೆ ಹೆಸರು ಬಂದಿದ್ದೇಗೆ..?

ಇದೆಲ್ಲದರ ನಡುವೆ ಹೆಚ್.ಡಿ.ಕೋಟೆ ಅರ್ಥಾತ್ ಹೆಗ್ಗಡದೇವನಕೋಟೆಯ ಇತಿಹಾಸದ ಬಗ್ಗೆ ಒಂದಿಷ್ಟು ಹೇಳಲೇ ಬೇಕಾಗುತ್ತದೆ. ಹಿಂದೆ ಈ ಪ್ರದೇಶಕ್ಕೆ ಪೊನ್ನಾಟ ಎಂಬ ಹೆಸರಿತ್ತೆಂದೂ ನಂತರ ಮೈಸೂರು ಮಹಾರಾಜರ ಸಾಮಂತನಾದ ಹೆಗ್ಗಡದೇವನು ಇಲ್ಲಿ 1622 ಚದರ ಕಿ.ಮೀ. ವಿಸ್ತೀರ್ಣದ ಕಂದಕಗಳನ್ನು ನಿರ್ಮಿಸಿ ಈ ಪ್ರದೇಶದ ಸುತ್ತಲೂ ಮಣ್ಣಿನಿಂದ ಕೋಟೆಯನ್ನು ಕಟ್ಟಿದನಂತೆ. ಹೆಗ್ಗಡದೇವನು ಕಟ್ಟಿದ ಕೋಟೆಯ ಕಾರಣಕ್ಕೆ ಮುಂದೆ ಈ ಪ್ರದೇಶ ಹೆಗ್ಗಡದೇವನಕೊಟೆಯಾಗಿ ಹೆಸರುವಾಸಿಯಾಯಿತು.

ಆ ನಂತರ ಕಾಲ ಕ್ರಮೇಣ ಸಂಕ್ಷಿಪ್ತ ರೂಪ ತಾಳಿ ಹೆಚ್.ಡಿ ಕೋಟೆಯಾಯಿತು. ಹೆಚ್.ಡಿ.ಕೋಟೆ ಪ್ರದೇಶವನ್ನು ಮೈಸೂರು ಮಹಾರಾಜರಿಗೂ ಮೊದಲು ಹೊಯ್ಸಳರು ಮತ್ತು ವಿಜಯನಗರ ಅರಸರು ಆಳಿದ್ದರಂತೆ ಇದಕ್ಕೆ ನಿದರ್ಶನವಾಗಿ ಐತಿಹಾಸಿಕ ದಾಖಲೆ, ಶಾಸನಗಳಿವೆ ಎಂದು ಹೇಳಲಾಗುತ್ತಿದೆ. ಕೇರಳದೊಂದಿಗೆ ಗಡಿಹಂಚಿಕೊಂಡಿರುವ ಹೆಚ್.ಡಿ.ಕೋಟೆಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು, ಇಲ್ಲಿನ ಪ್ರವಾಸಿ ತಾಣಗಳನ್ನು ಇನ್ನಷ್ಟು ಅಭಿವೃದ್ಧಿಗೊಳಿಸುವ ಕೆಲಸ ಆಗಬೇಕಾಗಿದೆ.

No comments:

Post a Comment